Thursday, December 27, 2007

ಪರ್ಯಾಯ ಪೀಠಾರೋಹಣ.. ಒಂದು ಅನಿಸಿಕೆ.

ಎರಡು ವರುಷಕ್ಕೊಮ್ಮೆ ಎಲ್ಲರೂ ಕಾತುರದಿಂದ ಎದುರು ನೋಡುವ ಉಡುಪಿ ಶ್ರೀ ಕೃಷ್ಣನ ಕಾರ್ಯಕ್ರಮವೆಂದರೆ, ಪರ್ಯಾಯ. ಈ ಬಾರಿಯ ಪೀಠಾರೋಹಣ ಕಾರ್ಯಕ್ರಮ ಶ್ರೀ ಸುಗುಣೇಂದ್ರ ತೀರ್ಥರ ವಿದೇಶ ಪ್ರವಾಸದಿಂದ ಸಾಕಷ್ಟು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ.

ಧರ್ಮ ಶಾಸ್ತ್ರಗಳ ಪ್ರಕಾರ ಕೆಲವೊಂದು ಸಂಗತಿಗಳು ಈಗಿನ ಜಗತ್ತಿನಲ್ಲಿ ಅಸಂಗತ ಎನಿಸಿದರೂ ಅವುಗಳನ್ನು ಶ್ರದ್ಧೆಯಿಂದ ನಡೆಸಿಕೊಂಡು ಹೋಗಬೇಕು ಎನ್ನುವುದು ಕೆಲವೊಬ್ಬರ ತರ್ಕ. ತರ್ಕದಿಂದ ಶ್ರದ್ಧೆಯ ಹಾಗೂ ಧರ್ಮದ ವಿಷಯಗಳನ್ನು ತೂಕ ಮಾಡಬಾರದು, ಹಾಗೆ ಮಾಡಿದ್ದೇ ಆದರೆ ಏನನ್ನೂ ಸಾಧಿಸಲಾಗುವದಿಲ್ಲ. ಧರ್ಮದ ವಿಷಯಗಳನ್ನು ನಾವು ಶ್ರದ್ಧೆಗೇ ಬಿಟ್ಟು ತರ್ಕಕ್ಕೆ ಹೋಗಬಾರದು ಎನ್ನುತ್ತಾರೆ. ಇನ್ನೂ ಕೆಲವರು ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂತೆ ನಮ್ಮ ಆಚರಣೆ, ಪದ್ಧತಿಗಳೂ ಬದಲಾಗಬೇಕು ಎನ್ನುತ್ತಾರೆ. ಹಳೆಯ ಕಾಲದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಹಡಗಿನಲ್ಲಿ ತಿಂಗಳುಗಟ್ಟಲೆ ಪ್ರವಾಸ ಮಾಡಬೇಕಾಗುತ್ತಿತ್ತು. ಸನ್ಯಾಸಿಗಳಾದವರು ಅಷ್ಟೊಂದು ದಿನ ಸ್ನಾನ, ನಿತ್ಯಾಹ್ನಿಕಗಳಿಲ್ಲದೆ ಇರುವದು ಅನಿವಾರ್ಯವಾದದ್ದರಿಂದ ಅವರು ಸನ್ಯಾಸತ್ವ ನೈಸರ್ಗಿಕವಾಗಿ ಕಳೆದುಕೊಳ್ಳುತ್ತಿದ್ದರು. ಆದರೆ ಕಾಲ ಬದಲಾಗಿದೆ. ಈಗ ಜಗತ್ತಿನ ಯಾವ ಮೂಲೆಗಾದರೂ ಕೇವಲ ಹನ್ನೆರಡು ತಾಸುಗಳ ಪ್ರಯಾಣ. ಹೀಗಾಗಿ ಸನ್ಯಾಸತ್ವಕ್ಕೆ ಯಾವ ಚ್ಯುತಿಯೂ ಬರಲಾರದಂತೆ ಇರಬಹುದು ಎನ್ನುವದು ಇವರ ತರ್ಕ.

ಈ ತರ್ಕವನ್ನು ಮೊದಲನೇ ಗುಂಪಿನವರು 'ಬಾಲಿಶ' ಎಂದು ತಳ್ಳಿ ಹಾಕುತ್ತಾರೆ. ಈ ತರ್ಕಗಳು ಅಸಂಗತವಾದರೂ ಒಂದಂಶ ಒಬ್ಬ ಗೃಹಸ್ಥನಿಗೆ ಒಪ್ಪುವಂಥದ್ದು ಆದರೆ ಸನ್ಯಾಸಿಗಲ್ಲ. ಧರ್ಮಶಾಸ್ತ್ರದ ತಳಹದಿಯ ಮೇಲೆ ಸಂಸಾರವನ್ನೇ ತ್ಯಜಿಸಿ ಅದರಲ್ಲಿ ವಿಧಿಸಿದ ಕಟ್ಟಳೆಗಳ ಪ್ರಕಾರ ಒಂದು ಜೀವನವನ್ನು ಆಯ್ದುಕೊಂಡ ಮೇಲೆ, ಲೌಕಿಕ ತರ್ಕಗಳ ಆಧಾರದ ಮೇಲೆ ಇದೇ ಧರ್ಮಶಾಸ್ತ್ರಗಳಲ್ಲಿ ಹೇಳಿದ್ದನ್ನು ಅಸಂಗತ ಎಂದು ಹೇಳುವದು ಬೇಜವಾಬ್ದಾರಿಯ ಮಾತು ಎನ್ನುತ್ತಾರೆ. ಒಬ್ಬ ಪೀಠಾಧಿಪತಿಯೇ ಧರ್ಮಶಾಸ್ತ್ರಗಳಲ್ಲಿ ಹೇಳಿದ್ದನ್ನು ಅಸಂಗತ ಎಂದರೆ ಅವುಗಳನ್ನು ಅನುಸರಿಸಿ ನಡೆಯುವ ಸಾಮಾನ್ಯ ಮನುಷ್ಯನ ಪಾಡೇನು? ಎನ್ನುತ್ತಾರೆ ಇವರು. ಇವರ ಪ್ರಕಾರ ಪ್ರತಿಯೊಬ್ಬ ಪೀಠಾಧಿಪತಿಯೂ ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ, ಹೇಳಿಕೆಯನ್ನೂ ಬಹಳ ಯೋಚಿಸಬೇಕು ಯಾಕೇಂದ್ರೆ ಇವರನ್ನು ನೋಡಿ ಅನುಸರಿಸಿ ನಡೆಯುವ ಸಹಸ್ರಾರು ಭಕ್ತಜನರು ಗೊಂದಲಕ್ಕೀಡಾಗುತ್ತಾರೆ.

ಈ ತರ್ಕ ವಿತರ್ಕಗಳಿಂದ ಧರ್ಮ-ಶಾಸ್ತ್ರವನ್ನೇ ಅರಿಯದ ಜನರು ಏನನ್ನೂ ಹೇಳಲು ಅಸಮರ್ಥರಾದರೂ, ಒಂದು ಮಾತು ನಿಜ. ಈ ಧರ್ಮ-ಶಾಸ್ತ್ರಗಳಲ್ಲಿ ಹಾಗೂ ತಂತಮ್ಮ ಧರ್ಮ-ಗುರುಗಳಲ್ಲಿ ಅಪಾರ ನಂಬಿಕೆಯನ್ನಿಟ್ಟುಕೊಂಡಿರುವಂಥ ಭಕ್ತರು ವಿಮುಖರಾದರೆ ಇವೆರಡಕ್ಕೂ ಉಳಿಗಾಲವಿಲ್ಲ. ಇವತ್ತಿನ ಜಗತ್ತಿನಲ್ಲಿ ಶ್ರದ್ಧೆ-ಭಕ್ತಿಯನ್ನು ಉಳಿಸಿಕೊಂಡಿರುವಂತಹ ಜನರನ್ನು ಸರಿಯಾಗಿ ಉಪದೇಶಿಸಿ ಇಲ್ಲೇ ಉಳಿಸಿಕೊಳ್ಳಬೇಕಾದದ್ದು ಪೀಠಾಧಿಪತಿಗಳ ಕರ್ತವ್ಯ. ಈ ತರಹ ಸಾರ್ವಜನಿಕವಾಗಿ ಪರಸ್ಪರ ಟೀಕಿಸುವುದರಿಂದ ಮೊದಲೇ ಹರಿದು-ಹಂಚಿಹೋಗಿರುವ ಸಮಾಜವನ್ನು ಇನ್ನಷ್ಟು ಶಿಥಿಲಗೊಳಿಸುವುದರಲ್ಲಿ ಯಾರ ಲಾಭವೂ ಇಲ್ಲ.

No comments: