Saturday, December 8, 2007

ಬ್ಯಾಂಗಲೋರ್ ಅಥವಾ ಬೆಂಗಳೂರು

ಬ್ಯಾಂಗಲೋರ್ ಬೆಂಗಳೂರು ಆಗಿದ್ದಕ್ಕೆ ಕೆಲವರಿಗೆ ಖುಷಿ ಮತ್ತು ಕೆಲವರಿಗೆ ದುಃಖ ಆದರೆ ಬಹುಸಂಖ್ಯಾತ ಜನರಿಗೆ ಕೇವಲ ಒಂದು ಹೆಸರು ಮಾತ್ರ what's in a name ಎನ್ನುವ ತಾತ್ಸಾರ. ನನಗೆ ವೈಯಕ್ತಿಕವಾಗಿ ಮೊದಲೆರಡು ಗುಂಪುಗಳ ಬಗ್ಗೆ ಯಾವುದೇ ತಕರಾರಿಲ್ಲ. ಭಾರತ ದೇಶದಲ್ಲಿ ಜನಿಸಿದ್ದಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು ತಮಗೆ ಸರಿಯೆನಿಸಿದ ರೀತಿಯಲ್ಲಿ ಜವಾಬ್ದಾರಿಯುತವಾಗಿ ಉಪಯೋಗಿಸುತ್ತಿದ್ದಾರೆ. ಆದರೆ ನನಗಿರುವ ಆಕ್ಷೇಪ ಈ ವಿಷಯವನ್ನೇ ತಾತ್ಸಾರದಿಂದ ಕಾಣುವ ಮೂರನೇ ಗುಂಪಿನವರ ಬಗ್ಗೆ. ಮನುಷ್ಯನಾಗಿ ಹುಟ್ಟಿದ ಮೇಲೆ ನಾವಿರುವ ಜಾಗದ ಬಗ್ಗೆ ನಮ್ಮ ಸುತ್ತಮುತ್ತಲಿನ ಬಗ್ಗೆ ಒಂದು ಪ್ರೀತಿ ವಿಶ್ವಾಸ ಇರುವದು ಬಹಳ ಮುಖ್ಯ. ಈ ತರಹ ತಾತ್ಸಾರ ತೋರುವದು ತಮ್ಮ ಅನಿಸಿಕೆಗಳನ್ನು ಯಾವುದೋ ಕಾರಣಕ್ಕಾಗಿ ಹೇಳದೇ ಇರುವದು, ಕೆಟ್ಟ ವಿಚಾರಗಳನ್ನೇ ಬಿಂಬಿಸುವವರಿಗೆ ಜಾಗ ಬಿಟ್ಟಂತಾಗುತ್ತದೆ. ಈ ತಾತ್ಸಾರವೇ ಇಂದು ನಾವು ಕಾಣುತ್ತಿರುವ ಇಂಥ ರಾಜಕಾರಣಿಗಳು ರಾಜ್ಯವಾಳಲು ಕಾರಣ.



ಇದು ಬರೀ ಒಂದು ಉದಾಹರಣೆ ಮಾತ್ರ. ಇಂದು ನಾನು, ನನ್ನದು, ನನ್ನವರು ಎಂಬ ಪದಗಳನ್ನು ಸ್ವಲ್ಪಮಟ್ಟಿಗಾದರೂ ಬದಿಗಿಟ್ಟು ನಾವು ಸಮಾಜಕ್ಕಾಗಿ, ನಮಗೆ ಸರಿಯೆನಿಸಿದ್ದನ್ನು ಪ್ರೋತ್ಸಾಹಿಸುವುದಕ್ಕಾಗಿ ಸಮಯ ಕಂಡುಕೊಳ್ಳದಿದ್ದರೆ ಇನ್ನೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು ನಿಶ್ಚಿತ. ಇಂಥ ವಿಷಯಗಳು ಬಂದಾಗ ಮೊದಲನೇ ಮನಸ್ಸಿನ ಕೂಗು 'ನನ್ನೊಬ್ಬನಿಂದ ಏನಾಗ್ಬೇಕಿದೆ ಬಿಡ್ರಿ' ಎನ್ನುವದು.



ಇದು ಸರ್ವಥಾ ತಪ್ಪು ಅಂತ ನನ್ನ ಅನಿಸಿಕೆ. ಮೊದಲನೆಯದಾಗಿ ನಾನು ಮಾಡುವುದರಿಂದ ಏನಾದರೂ ಬದಲಾವಣೆಯಾದ್ರೇನೆ ನಾನು ಕೆಲಸ ಮಾಡೋದು ಅನ್ನೋದೇ ತಪ್ಪು. ಬದಲಾವಣೆಯಾಗೋದಕ್ಕೆ ಕೆಲಸ ಮಾಡಬಹುದು ಆದರೆ ಅದು ಆಗಲೇ ಬೇಕು ಅನ್ನೋದು ಯಾವ ನ್ಯಾಯ. ಆಗಲಿಕ್ಕೂ ಇಲ್ಲ. ಎರಡನೆಯದಾಗಿ ನನ್ನ ಮಟ್ಟಿಗೆ, ನನಗೆ ಸಮಾಧಾನವಾಗುವಷ್ಟು ಬದಲಾವಣೆಯಾದರೆ ಅದೇ ಒಂದು ಸಾಧನೆ ಎಂದು ತಿಳಿದು ಕೆಲಸ ಮಾಡುತ್ತಾ ಇರಬೇಕು. ಎಲ್ಲರೂ ಇವೆರಡೂ ಸೂತ್ರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿದರೆ, ಮೇಲೆ ಹೇಳಿದಂಥ ಪರಿಸ್ಥಿತಿ ಬರಲಾರದು.

ಈ ಹರಟೆ ಮಂಚ ಇನ್ನೂ ಬೆಳೆಯಬೇಕು ಅನ್ನೋದು ನನ್ನ ಮಹದಾಸೆ. ನೀವೆಲ್ಲಾ ಸಹಕರಿಸ್ತೀರಿ ಅಂದುಕೊಂಡಿದ್ದೇನೆ.

No comments: